ಆಫ್ರಿಕದ ರಾಜಕೀಯ ಚರಿತ್ರೆ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

	ಹದಿನೈದು ಹದಿನಾರನೆಯ ಶತಮಾನದವರೆಗೂ ಆಫ್ರಿಕವನ್ನು ಕತ್ತಲೆಯ ಖಂಡ ಎಂದು ಕರೆಯುತ್ತಿದ್ದುದು ಸರಿಯಷ್ಟೆ. ಕಾರ್ತೇಜನ್ನು ಒಳಗೊಂಡಂತೆ ತಮಗೆ ಆಫ್ರಿಕದಲ್ಲಿ ಸೇರಿದ್ದ ಪ್ರಾಂತ್ಯವನ್ನು ರೋಮನರು ಆಫ್ರಿಕ ಎಂಬ ಹೆಸರಿನಿಂದ ಕರೆದರು. ಅಲ್ಲಿಂದ ಆಚೆ ರೋಮಿನ ಲೇಖಕರು ಈ ಖಂಡವನ್ನು ಲಿಬಿಯ ಎಂದು ಕರೆದರು. ಹೆರೆಡೋಟಸ್ (ಕ್ರಿ. ಪೂ. 484), ಟಾಲೆಮಿ (ಕ್ರಿ. ಪೂ. 139) ಇವರು ತಮ್ಮ ಕೃತಿಗಳಲ್ಲಿ ಈ ಖಂಡದ ಬಗ್ಗೆ ಉಲ್ಲೇಖಿಸಿದ್ದಾರೆ. ಏಳನೆಯ ಶತಮಾನದಲ್ಲಿ ಅರಬ್ಬರಿಗೆ ಈ ನಾಡಿನ ವಿಷಯ ತಿಳಿದಿತ್ತು. ಎದ್ರಿಸಿ, ಇಬ್ನ್ ಬತೂತ, ಜಾನ್‍ಲಿಯೊ ಮೊದಲಾದ ಭೂಗೋಳಶಾಸ್ತ್ರಜ್ಞರ ಬರಹಗಳಲ್ಲಿ ಖಂಡದ ಬಗ್ಗೆ ಹೆಚ್ಚಿನ ಮಾಹಿತಿಗಳು ಸಿಗುತ್ತವೆ. 17ನೆಯ ಶತಮಾನದಲ್ಲಿ ಪೋರ್ಚುಗೀಸರು ವಾಯುವ್ಯ ತೀರದಲ್ಲಿ ಬಂದು ನೆಲೆಸತೊಡಗಿದರು. 1487ರಲ್ಲಿ ಬಾರ್ತಲೋಮಿಯೊ ಡಯಾಜ್ó ಗುಡ್‍ಹೋಪ್ ಭೂಶಿರವನ್ನು ಕಂಡ. 1497ರಲ್ಲಿ ವಾಸ್ಕೊಡಗಾಮ ಗುಡ್‍ಹೋಪ್‍ನ ಮೂಲಕ ಭಾರತಕ್ಕೆ ಜಲಮಾರ್ಗ ಪತ್ತೆ ಹಚ್ಚಿದ. ಅಲ್ಲಿಂದಾಚೆ ಯೂರೋಪಿಯನ್ನರು ಕ್ರಮಕ್ರಮವಾಗಿ ಆಫ್ರಿಕವನ್ನು ಆಕ್ರಮಿಸತೊಡಗಿದರು.

	ಅಲ್ಲಿನವರೆಗಿನ ಆಫ್ರಿಕದ ರಾಜಕೀಯ ಚರಿತ್ರೆ ಬಹು ಸಾಧಾರಣವಾದುದು. ಆದಿವಾಸಿಗಳಾದ ನೀಗ್ರೊಗಳು, ಹಾಟೆಂಟಾಟರು, ಬುಷ್‍ಮೆನ್‍ಗಳು ಜಲವಸತಿ ಇರುವ ಕಡೆಗಳಲ್ಲಿ, ಪ್ರಾಕೃತಿಕ ಆಶ್ರಯಗಳಾದ ಗುಡ್ಡಗಾಡುಗಳಿರುವಲ್ಲಿ ಅನೇಕಾನೇಕ ಪಾಳೆಯಗಳಾಗಿ ಜೀವಿಸುತ್ತಿದ್ದರು. ಒಂದೊಂದು ಜಾತಿ, ಉಪಜಾತಿಯಲ್ಲೂ ಅನೇಕ ಪಂಗಡಗಳಿದ್ದುವು.

	ಈ ಪಾಳೆಯಗಳಲ್ಲಿ ಬಹುಪಾಲು ಅಲೆಮಾರಿ ರೀತಿಯವು. ಇವುಗಳಲ್ಲಿ ಒಂದೊಂದು ಪಾಳೆಯಕ್ಕೂ ಒಬ್ಬೊಬ್ಬ ನಾಯಕನಿರುತ್ತಿದ್ದ. ಅವನು ಆ ಪಾಳೆಯದ ಆಗುಹೋಗುಗಳನ್ನೆಲ್ಲ ನಡೆಸುವ ನೇತಾರ. ಅವನಿಗೆ ವಿಧೇಯರಾಗಿ ಇತರರು ನಡೆಯುತ್ತಿದ್ದರು, ಪಾಳೆಯ ಪಾಳೆಯಗಳ ಮಧ್ಯೆ ಜಗಳಗಳು ಯುದ್ಧಗಳು ಆಗುತ್ತಿದ್ದುವು. ಸ್ತ್ರೀಯರನ್ನೇ ತಮ್ಮ ಒಡತಿಯರನ್ನಾಗುಳ್ಳ ಪಾಳೆಯಗಳೂ ಇದ್ದುವು. ಪಾಳೆಯಗಳೆಲ್ಲ ಹಿಂದಿನ ಪಾಳೆಯಗಾರಿಕೆಯ ಮಾದರಿಯವೇ ಆಗಿದ್ದುವು. ಯೊರೂಬ, ಅಷಾಂಟಿ, ದಹೋಮೆ - ಇವು ಅಂಥ ಕೆಲವು ಪಾಳೆಯಗಳು. ಈ ಜನ ಸಹಜವಾಗಿ ಯುದ್ಧ ಪ್ರಿಯರು. ಒಂದು ಕಾಲದಲ್ಲಿ ನಿರಂತರವಾಗಿ ಖಂಡದ ಉದ್ದಕ್ಕೂ ರಣಕಹಳೆ ಮೊಳಗುತ್ತಲೇ ಇತ್ತು. ನೈಜೀರಿಯ ಭಾಗದಲ್ಲಿ ಬಹು ದೊಡ್ಡ ಸಂಸ್ಕøತಿ, ನಾಗರಿಕತೆಗಳನ್ನುಳ್ಳ ಆದಿವಾಸಿ ರಾಜ್ಯಗಳಿದ್ದುವೆಂದು ಹೇಳಲಾಗಿದೆ. ಇವನ್ನು ಬಿಟ್ಟರೆ ಚರಿತ್ರೆಯಲ್ಲಿ ಆದ್ಯ ಪ್ರಾಶಸ್ತ್ಯವನ್ನು ಪಡೆದ ದೇಶಗಳೆಂದರೆ ಈಜಿಪ್ಟ್ ಮತ್ತು ಇಥಿಯೋಪಿಯಗಳು. ಅವುಗಳ ಬಗ್ಗೆ ಪ್ರತ್ಯೇಕ ಲೇಖನಗಳಿವೆ.

	ಖಂಡ ದೊಡ್ಡದಾದರೂ ಜನರಲ್ಲಿ ರಾಷ್ಟ್ರೀಯ ಭಾವನೆ ಮೂಡದಿರಲು ಅವರ ನೂರಾರು ಸಣ್ಣಪುಟ್ಟ ಒಳಪಂಗಡಗಳೇ ಕಾರಣವಾದುವು. ಇದರಿಂದಾಗಿ ಯೂರೋಪಿನಿಂದ ವಲಸೆ ಬಂದ ಬಿಳಿಯರು ಕರಿಯರನ್ನು ಸುಲಭವಾಗಿ ಸೋಲಿಸಿ ತಮ್ಮ ಸ್ವಾಸ್ಥ್ಯಗಳನ್ನು ಸ್ಥಾಪಿಸಲು ಅನುಕೂಲವಾಯಿತು. ಹದಿನಾರನೆಯ ಶತಮಾನದಲ್ಲಿ ಪ್ರಾರಂಭವಾದ ವಿದೇಶೀಯ ಶೋಷಣೆ ದ್ವಿಮುಖವಾಗಿದ್ದು ಮೂರು ಶತಮಾನಗಳ ಕಾಲ ನಿರಂತರವಾಗಿ ನಡೆಯಿತು. ಅಲ್ಲಿನ ಆದಿವಾಸಿಗಳನ್ನು ಗುಲಾಮರನ್ನಾಗಿ ಮಾಡಿ ದುಡಿಸಿದುದಲ್ಲದೆ ಅವರನ್ನು ಯೂರೋಪು, ಅಮೆರಿಕಗಳಲ್ಲಿ ಮಾರಲಾಯಿತು. ಆಫ್ರಿಕದ ಪ್ರಾಕೃತಿಕ ಸಂಪತ್ತನ್ನು ದೋಚಲಾಯಿತು.

	ಇದನ್ನು ಪ್ರತಿಭಟಿಸುವ ದೇಶೀಯ ಆಂದೋಲನಗಳನ್ನು ದಮನ ಮಾಡಲಾಯಿತು. ಆದರೆ ಕಾಲಕ್ರಮೇಣ ಮಾನವ ಸ್ವಾತಂತ್ರ್ಯಕ್ಕೆ ಗೌರವ ಕೊಡುವ ಭಾವನೆ ಹೆಚ್ಚಿದಂತೆಲ್ಲ ವಿಶ್ವವ್ಯಾಪಕವಾಗಿ ಜನಜಾಗೃತಿ ಉಂಟಾಗಿ ಅದರಿಂದ ಆಫ್ರಿಕನ್ನರ ಪರಿಸ್ಥಿತಿ ಉತ್ತಮಗೊಳ್ಳಲುಪಕ್ರಮಿಸಿತು. ಅಮೆರಿಕದಲ್ಲಿ ಗುಲಾಮಗಿರಿಯ ವಿರುದ್ಧ ನಡೆದ ಚಳುವಳಿ ದಕ್ಷಿಣ ಆಫ್ರಿಕದಲ್ಲಿ ಗಾಂಧೀಜಿ ಪ್ರಾರಂಭಿಸಿದ ಸತ್ಯಾಗ್ರಹ, ಎರಡು ಮಹಾಯುದ್ಧಗಳು, ಪರಕೀಯ ಸ್ವಾಸ್ಥ್ಯಗಳ ನಿರ್ಮೂಲನ ಚಳುವಳಿ, ಸ್ವರಾಜ್ಯಕ್ಕಾಗಿ ನಡೆದ ಹೋರಾಟಗಳು - ಇವೆಲ್ಲದರ ಫಲವಾಗಿ ಆಫ್ರಿಕದಲ್ಲೂ ಟ್ಯೂನೀಸಿಯ (1956), ಮೊರಾಕೊ (1956), ಅಲ್ಜೀರಿಯ (1962), ಸೂಡಾನ್ (1956), ಲಿಬಿಯ (1951), ಅರಬ್ಬೀ ಗಣರಾಜ್ಯ (1962), ಕೆನ್ಯ (1963), ಕಾಂಗೊ (1960), ಜಾಂಬಿಯ (1964), ನೈಜೀರಿಯ (1960), ನೈಜರ್ (1960) ಹೀಗೆ ಅನೇಕಾನೇಕ ರಾಷ್ಟ್ರಗಳು ಸ್ವತಂತ್ರವಾದವು. ಈ ಹೋರಾಟ ಇನ್ನೂ ಮುಂದುವರಿದಿದೆ. ನೀಗ್ರೊ ಎಂದರೆ ಕತ್ತಲೆಯ ಖಂಡದವ, ಗುಲಾಮ ಎಂಬ - ಅಭಿಪ್ರಾಯ ಕ್ರಮೇಣ ಸುಳ್ಳಾಗುತ್ತಿದೆ. ತಾನು ಆಫ್ರಿಕದ ಸ್ವತಂತ್ರ ಪ್ರಜೆ ಎಂಬ ಭಾವನೆ ಆ ಜನರಲ್ಲಿ ಬೆಳೆಯುತ್ತಿದೆ. ಅದಕ್ಕೆ ಇತರರಿಂದ ಪುರಸ್ಕಾರ ದೊರೆಯಲು ಮೊದಲಾಗಿದೆ. ಆಫ್ರಿಕದ ಸ್ವತಂತ್ರ ರಾಜ್ಯತಂತ್ರ ಇಪ್ಪತ್ತನೆಯ ಶತಮಾನದ ಉತ್ತರಾರ್ಧದ ಶಿಶುವೆಂದು ಹೇಳಬಹುದು. ಅದರ ಚರಿತ್ರೆ ಈಗ ರೂಪುಗೊಳ್ಳುತ್ತಿದೆ.									